ಎಲುನೇರ್ಪಿಕ ಶಸ್ತ್ರವೈದ್ಯ (ಅಸ್ಥಿ ಶಾಸ್ತ್ರ) 

	ಎಲುಬು, ಕೀಲು, ಅವುಗಳಿಗೆ ಸಂಬಂಧಿಸಿದ ಸ್ನಾಯು ಕಂಡರ ಹುರಿ, ನರ ಮತ್ತು ಇನ್ನಿತರ ಊತಕಗಳ ಸಹಜ ಆರೋಗ್ಯ ಕಾಪಾಡಿಕೊಳ್ಳಲು, ಅವುಗಳ ರಚನೆ ತಿಳಿದು ನಿಜಗೆಲಸಗಳನ್ನು ಅರಿತು ಕೊಳ್ಳುವ ಶಾಸ್ತ್ರವೇ ಅಸ್ಥಿಶಾಸ್ತ್ರ. ಇಂದಿನ ದಿನಗಳಲ್ಲಿ ಅಸ್ಥಿಶಾಸ್ತ್ರವು ಬೃಹತ್ತಾಗಿ ಬೆಳೆದಿದೆ. ವಿಜ್ಞಾನದ ಎಲ್ಲ ಶಾಖೆಗಳು ಬೆಳೆದು ಅಸ್ಥಿ ಶಾಸ್ತ್ರ ಬೆಳೆಯಲು ಅನುವು ಮಾಡಿಕೊಟ್ಟಿದೆ. ಅಸ್ಥಿ ಶಾಸ್ತ್ರಕ್ಕೆ ಇಂಗ್ಲಿಷಿನಲ್ಲಿ ಆರ್ಥೋಪೆಡಿಕ್ಸ್ ಎನ್ನುವ ಹೆಸರಿದೆ. ಇದು ಗ್ರೀಕ್ ಭಾಷೆಯಿಂದ ಬಂದಿದ್ದು. ಆರ್ಥೋ ಅಂದರೆ ನೇರ ಮತ್ತು ಪೆಡಿಯಾ ಅಂದರೆ ಮಗು. ಸೊಟ್ಟಗಿರುವ ಮಕ್ಕಳನ್ನು ನೇರಗೊಳಿಸುವ ಶಾಸ್ತ್ರವೆಂದು ಆರ್ಥೋಪೆಡಿಕ್ಸ್ ಆಯಿತು. ಆದರೆ ಬರೀ ಮಕ್ಕಳನ್ನಷ್ಟೇ ಅಲ್ಲ ಎಲ್ಲ ವಯಸ್ಸಿನವರ ಮೂಳೆಯ ರೋಗಗಳನ್ನು, ನ್ಯೂನತೆಯನ್ನು ಸರಿಪಡಿಸುವುದು ಅಸ್ಥಿಶಸ್ತ್ರಜ್ಞನ ಕೆಲಸ.

	ಪ್ಯಾರಿಸ್ ವಿಶ್ವವಿದ್ಯಾಲಯದ ವೈದ್ಯ ಶಾಸ್ತ್ರ ಪ್ರಾಧ್ಯಾಪಕ ನಿಕೊಲಾಸ್ ಆಂಡ್ರೆ 1241 ರಲ್ಲಿ ಅಸ್ಥಿವಿಭಾಗವನ್ನು ಆರ್ಥೋಪೆಡೆಕ್ಸ್ ಅಂತಕರೆದದ್ದು ಇಂದಿಗೂ ಬಳಕೆಯಲ್ಲಿ ಉಳಿದಿದೆ. 18ನೇ ಶತಮಾನದಲ್ಲಿ ಮಕ್ಕಳ ಕೈಕಾಲುಗಳ ಸೊಟ್ಟು, ಊನಗಳನ್ನು ಸರಿಪಡಿಸಲೋಸುಲು ಸ್ವಿಟ್ಜರ್ಲೆಂಡಿನಲ್ಲಿ ಒಂದು ಸಂಸ್ಥೆ ಪ್ರಾರಂಭಿಸಲಾಯಿತು. ವಿಲಿಯಂ ಹಂಟರ, ಅವರ ತಮ್ಮ ಜಾನ ಹಂಟರ ಇರ್ವರೂ ಮೂಳೆಗಳ, ಕೀಲುಗಳ ರಚನೆ, ಕಾರ್ಯ, ಬೆಳವಣೆಗೆಗಳ ಬಗ್ಗೆ ವಿವರವಾದ ಅಭ್ಯಾಸ ಮಾಡಿ ವಿವರಿಸಿದ್ದಾರೆ. ಜಾನ ಹಿಲ್ಟನ್ (1804-1ಪ78) ಅಸ್ಥಿ ಶಾಸ್ತ್ರದ ಪುಸ್ತಕ ಬರೆದವರಲ್ಲಿ ಪ್ರಮುಖ. ಚಿಕಿತ್ಸೆಯಲ್ಲಿ ಅಂಗಭಾಗದ ವಿಶ್ರಾಂತಿಯ ಮಹತ್ವ ಇದರಲ್ಲಿ ತಿಳಿಸಿದೆ. ಜರ್ಮನಿಯ ಸ್ಟ್ರೋಮೆಯರ (1804-1876) ಹೊರಕಾರಣದ ಕೀಲುಗಟ್ಟುವಿಕೆ ನಿವಾರಿಸಲು ಕಂಡರ ಕೋಯ್ಸಿಳಿಕೆ (ಟಿನಟೊಮಿ) ವಿಧಾನ ಜಾರಿಗೆ ತಂದನು. ಈಗಲೂ ಮುರಿದ ಕಾಲಿನ ಚಿಕಿತ್ಸೆಯಲ್ಲಿ ಬಳಸುವ ಸಳಾಕೆಯ ದಬ್ಬೆಯನ್ನು “ಹಗ್ ಒವೆನ್‍ಥಾಮಸ್” ಕಂಡು ಹಿಡಿದು ಬಳಸಿದ ಕೀರ್ತಿಗೆ ಭಾಜನ ನಾಗಿದ್ದಾನೆ. ಅಸ್ಥಿಶಾಸ್ತ್ರಕ್ಕೆ ವ್ಶೆಜ್ಞಾನಿಕ ತಳಹದಿ ನೀಡಿದವರಲ್ಲಿ ಥಾಮಸ್ ಮೊದಲಿಗ. ನಂತರ ಸರ್ ರಾಬರ್ಟ ಜೋನ್ಸ್ (1858-1933) ಸಾಧನೆಗಳು ಭದ್ರ ಅಡಿಪಾಯ ಒದಗಿಸಿತು. ಮೊದಲನೆ ಮತ್ತು ಎರಡನೆ ಮಹಾಯುದ್ಧಗಳಲ್ಲಿ ಸಂಭವಿಸಿದ ಭಯಾನಕ ಮನ ಕಲಕುವ ಘೊರಗಾಯಗಳನ್ನು ಉಪಚರಿಸುವಾಗ ವ್ಶೆದ್ಯರಿಗೆ ಹೊಸ ಹೊಸ ಚಿಕಿತ್ಸೆ ನೀಡುವ ಮಾರ್ಗೊಪಾಯಗಳು ತೆರೆದವು. ಅದರ ಸದುಪಯೋಗದಿಂದಾಗಿ ಇಂದು ಅಸ್ಥಿ ಶಾಸ್ತ್ರ ಒಂದು ಮಹತ್ತರವಾದ ವೈದ್ಯಶಾಸ್ತ್ರವಾಗಿ ಬೆಳೆಯಲು ಸಾಧ್ಯವಾಗಿದೆ. 
ಗಾಯಗಳ ಚಿಕಿತ್ಸೆ : ಎಲುಬು ಮುರಿದ ಗಾಯಗಳಲ್ಲಿ ಮುಖ್ಯವಾಗಿ ಎರಡು ವಿಧಗಳು ಒಂದು ಮುಚ್ಚಿದ ಮುರಿತ; ಇದರಲ್ಲಿ ಚರ್ಮಕ್ಕೆ ಗಾಯವಾಗಿರುವದಿಲ್ಲ. ಇನ್ನೊಂದು ತೆರೆದ ಮುರಿತ; ಇದರಲ್ಲಿ ಚರ್ಮಕ್ಕೆಗಾಯವಾಗಿ, ಮುರಿದೆಲುಗಳ ತುದಿಗಳು ಹೋರಭಾಗಕ್ಕೆ ಸಂಪರ್ಕ ಪಡೆಯುತ್ತವೆ. ಮುಚ್ಚಿದ ಮುರಿತಕ್ಕೆ ಸರಳ ಮುರಿತವೆಂದೂ ಕರೆಯುತ್ತಾರೆ. ಕಾರಣ ಅದರ ಚಿಕಿತ್ಸೆ ಸರಳ. ಇಲ್ಲಿ ಶಸ್ತ್ರ ಕ್ರಿಯೆ ಅಪರೂಪಕ್ಕೆ ಬೇಕಾಗುತ್ತದೆ. ಮುರಿದು ಸರಿದದ್ದನ್ನು ಅರುವಳಿಕೆಯ ಸಹಾಯದಿಂದ ಸರಿ ಕೂಡಿಸುತ್ತಾರೆ. ನಂತರ ಅದು ಮತ್ತೇ ಸರಿಯದಂತೆ ಗಚ್ಚಿನ ದಬ್ಬೆ ಇಲ್ಲವೆ ಅಚ್ಚಿನಲ್ಲಿ ಹಿಡಿದಿಡುತ್ತಾರೆ. ಎಲುವು ಕೂಡಿಕೊಳ್ಳಲು ಕೆಲವು ವಾರಗಳೇ ಬೇಕಾಗುತ್ತದೆ. 

	ತೆರೆದ ಮುರಿತದಲ್ಲಿ ಚರ್ಮಕ್ಕೆ ಗಾಯವಾಗಿ ಬಾಹ್ಯ ಸಂಪರ್ಕ ಹೊಂದಿರುವದರಿಂದ ಸೋಂಕು ತಗಲುವ ಸಾಧ್ಯತೆಗಳಿರುತ್ತವೆ. ಸೋಂಕು ತಗುಲದಂತೆ ಗಾಯ ಮಾಯಬೇಕು. ಅದೇ ಸಮಯದಲ್ಲಿ ಮುರಿದೆಲುಬು ಸರಿಕೂಡಿಸಿ ಹಿಡಿದಿಟ್ಟು ಎಲುಬು ಕೂಡಿಕೊಳ್ಳಲು ಅನುವು ಮಾಡಿ ಕೊಡಬೇಕು. ಇದು ಸರಳವಲ್ಲ. ಶಸ್ತ್ರ ಕ್ರಿಯೆ ಬೇಕಾಗುತ್ತದೆ. ಸ್ಪಚ್ಛತೆ, ರೋಗಾಣುರಹಿತತೆ, ಜೀವಿರೋಧಕ ಔಷಧ, ಸಕಲ ಸೌಕರ್ಯಯುಕ್ತ ಶಸ್ತ್ರಕ್ರಿಯಾ ಮಂದಿರ, ಜೀವಕ್ಕಪಾಯವಾಗದ ಅರುವಳಿಕೆ ನುರಿತ ದಾದಿಯರು ಕಲಾತ್ಮಕವಾಗಿ ಶಸ್ತ್ರ ಕ್ರಿಯಾ ಪರಿಣಿತ ವೈದ್ಯರುಗಳೆಲ್ಲ ಲಭ್ಯವಿದ್ದಾಗಲೂ ತೆರೆದ ಮುರಿತದ ಚಿಕಿತ್ಸೆ ಕಷ್ಟವೆನಿಸಬಹುದು. ಆದರೆ ಅಂದಿನ ದಿನಗಳನ್ನು ನೆನೆಸಿಕೊಂಡರೆ ಇಂದು ಸಾಧಿಸಿದ್ದು ಬಹಳವಿದೆ. 

	ಎಲುಬು ಮುರಿದು ಮುರಿದೆಲುಬು ಸರಿದಾಗ ಅವುಗಳನ್ನು ಸರಿಕೂಡಿಸಬೇಕು. ಇದನ್ನು ಅರುವಳಿಕೆಯಲ್ಲಿ ಸಹಾಯಕರ ಸಹಯೋಗದೊಂದಿಗೆ ಸಾಧಿಸಬೇಕಾಗುತ್ತದೆ. ಇಲ್ಲಿ ಎಲುಬುಗಳು ನೇರವಾಗಿ ಕಾಣುವದಿಲ್ಲ ಚರ್ಮ, ಸ್ನಾಯು, ಕಂಡರಗಳ ಅಡಿಯಲ್ಲಿರುವ ಮುರಿದ ಮೂಳೆಯ ತುಂಡುಗಳ ಚಿತ್ರ ಎಕ್ಸರೇ ಚಿತ್ರದಲ್ಲಿ ಕಂಡು, ಕೈಯಿಂದ ನೇವರಿಸುತ್ತ ಅಂದಾಜಿನ ಮೇಲೆ ಸರಿಸುತ್ತ ಸರಿಕೂಡಿಸಬೇಕಾಗುತ್ತದೆ. ಒಂದು ಸಮಯ ಇಂತಹ ಕೂಡಿಸುವ ಪದ್ದತಿಯಿಂದ ಸರಿಪಡಿಸಲು ಸಾಧ್ಯವಾಗದಿದ್ದರೆ ಶಸ್ತ್ರಕ್ರಿಯೆ ಮಾಡಿ ಮುರಿದೆಲುವುಗಳನ್ನು ಕಣ್ಣಾರೆಕಂಡು, ಕೈಯಿಂದ (ಸಾಧನಗಳನ್ನು ಬಳಸಿ) ಸರಿ ಕೂಡಿಸಬೇಕಾಗುತ್ತದೆ. ಹೀಗೆ ಸರಿಕೂಡಿಸಿದ್ದನ್ನು ಮತ್ತೇ ಜಾರದಂತೆ ಒಳ ಜೋಡಣೆಯಿಂದ ಹಿಡಿದಿಡಬೇಕಾಗುತ್ತದೆ. ಒಳ ಜೋಡಣೆಗಾಗಿ ಅನೇಕ ವಿವಿಧ ಸಾಧನೆಗಳಿವೆ. ಒಳೆಲುಮಳೆ, ತೂತುತಟೆಕ ತಿರುವುಮಳೆ, ತಂತಿ, ಒಳೆಲುಮಳೆ ಒಳಹಿಡಿತ (ಇಂಟರಲಾಕಿಂಗ್ ನೇಲ್) ಗಳನ್ನು ಬಳಸಬಹುದು. ಲೋಹದ ಈ ಸಾಧನಗಳು ಜಡ ಗುಣಹೊಂದಿದ್ದು ತುಕ್ಕು ಹಿಡಿಯುವದಿಲ್ಲ, ವಿದ್ಯುತ ಚೋದನೆಗೆ ಪ್ರತಿಕ್ರಿಯಿಸುವದಿಲ್ಲ ಮತ್ತು ಸೋಂಕಿಗೆ ಕಾರಣವಾಗುವದಿಲ್ಲ. 

	ಕೆಲವೊಮ್ಮೆ ಒಳ ಜೋಡಣೆ ಮಾಡುವುದು ಹಿತಕರವೆನಿಸುವುದಿಲ್ಲ. ಆಗ ಮುರಿತದಿಂದ ಸ್ಪಲ್ಪ ಕೆಳಗೆ ಹಾಗೂ ಮೇಲೆ ಎರಡೆರಡು ಉದ್ದುದ್ದ ಮಳೆಗಳನ್ನು ಎಲುಬಿನೊಳಗಿಂದ ತೂರಿ ಅವುಗಳನ್ನು ಹೊರಭಾಗದಲ್ಲಿ ದೃಢವಾದ ಸಲಕರಣಿಗಳಿಂದ ಹಿಡಿದಿಡುವುದಿದೆ. ಹೀಗೆ ಹಿಡಿದಿಟ್ಟರೆ ಸರಿ ಕೂಡಿಸಿದೆಲುಬು ಸರಿಯುವುದಿಲ್ಲ ಮತ್ತು ಚರ್ಮದ ಗಾಯಕ್ಕೆ ಪಟ್ಟಿ ಮಾಡಲು ಸರಳವಾಗುತ್ತದೆ. ಇದಕ್ಕೆ ಹೊರ ಹಿಡಿತವೆನ್ನುತ್ತಾರೆ. ಒಳಹಿಡಿತ ಇಲ್ಲವೆ ಹೊರಹಿಡಿತದಿಂದಾಗಿ ಚಿಕಿತ್ಸೆಗೊಳಪಟ್ಟ ವ್ಯಕ್ತಿತನ್ನ ಗಾಯದ ಅಂಗವನ್ನು ಕೂಡಲೆ ಅಲುಗಾಡಿಸುತ್ತಿರಲು ಸಾಧ್ಯವಾಗುತ್ತದೆ, ಸಹಾಯದಿಂದ ನಡೆದಾಡಲು ಬರುತ್ತದೆ. ಪ್ಲ್ಯಾಸ್ಟರ್ ಅಚ್ಚಿದಲ್ಲಿ ವಾರ, ತಿಂಗಳುಗಟ್ಟಲೆ ಕಾಲ ಕಳೆಯುವುದು ಇಲ್ಲವಾಗುತ್ತದೆ. ಹೀಗೆ ಗಾಯಗಳ, ಮುರಿತಗಳ ಮತ್ತು ಕೀಲತಪ್ಪಿಕೆಗಳ ಚಿಕಿತ್ಸೆಯಲ್ಲಿ ಅಸ್ಥಿ ಶಾಸ್ತ್ರವು ವ್ಶೆಜ್ಞಾನಿಕವಾಗಿ ಬಹಳ ಬೆಳೆದಿದೆ ಹಾಗೂ ಉತ್ತಮ ಫಲನೀಡುತ್ತಿದೆ. 

	ವಯಸ್ಸಾದ ಹಿರಿಯರ ಎಲುಬುಗಳು ಮೆತ್ತಗಾಗಿರುವುದರಿಂದ ಸ್ಪಲ್ಪ ಪೆಟ್ಟಿನಿಂದಾಗಿ ಮುರಿಯುತ್ತವೆ. ಇವರ ತೊಡೆಲು ಕತ್ತು (ಫಿಮೋರಲ ನೆಕ್) ಮುರಿಯುವುದು ಬಹಳ ಸಾಮಾನ್ಯ. ತೊಡೆಲು ಕತ್ತು ಮುರಿದರೆ ನಡೆಯಲು ಆಗುವುದಿಲ್ಲ. ಬಿದ್ದಲ್ಲೇ ಬಿದ್ದರಬೇಕಾಗಿರುತ್ತದೆ. ಈ ಮುರಿತ ಸರಿ ಹೊಂದುವುದು ಕಷ್ಟ ಸಾಧ್ಯ. ಹೀಗಾಗಿ ಜೀವನದ ಅಂತ್ಯದತ್ತ ಸಾಗುವುದು ಅನಿವಾರ್ಯವಾಗಿತ್ತು. ಆದರೆ ವ್ಯೆಜ್ಞಾನಿಕ ಪ್ರಗತಿಯಿಂದ ಇಂತವರ ತೊಡೆಲುತಲೆ ಕೊಯ್ತೆಗೆದು ಅದನ್ನು ಸ್ಟೀಲ್ ನಿಂದ ತಯಾರಿಸಿದ ತದ್ರೂಪ ತೊಡೆಲುತಲೆ ಅಳವಡಿಸುವ ಶಸ್ತ್ರ ಕ್ರಿಯೆ ಕೈಕೊಂಡರೆ ವ್ಯಕ್ತಿ ಮೂರನೇದಿನಕ್ಕೆ ಎದ್ದು ಒಡಾಡಲು ಸಾಧ್ಯವಾಗುತ್ತದೆ. 

ಕೀಲು ರೋಗಗಳಲ್ಲಿ : ರುಮಟಾಯ್ಡ್ ಕೀಲುರಿತದಿಂದ ಇಲ್ಲವೆ ಮುಪ್ಪಿನಿಂದಾಗಿ ಪಡೆವ ಎಲುಗೀಲುರಿತದಲ್ಲಿ ಕೀಲಿನೆಲುವುಗಳು ಸವೆದು ನೋವಾಗುತ್ತದೆ. ಕೀಲು ಅಂದಗೆಡುತ್ತದೆ. ಮಂಡಿಕೀಲಿನಲ್ಲಿ ಇಲ್ಲವೆ ಚಪ್ಪೆಕೀಲಿನಲ್ಲಿದು ಕಂಡರೆ ಕೂಡಲು, ಏಳಲು, ನಡೆಯಲು ಬಹಳ ತೊಂದರೆಯಾಗುತ್ತದೆ. ಕೀಲುಗಟ್ಟುವ ಶಸ್ತ್ರಕ್ರಿಯೆಯಿಂದ ಕೀಲಿನ ಚಲನೆ ಇಲ್ಲವಾಗಿ ದಿನದ ಆಗುಹೋಗುಗಳು ಕಷ್ಟದಾಯಕವಾಗುತ್ತದೆ. ಆದರೆ ಕೃತಕ ಕೀಲು ಅಳವಡಿಸವುದರಿಂದಾಗಿ ವ್ಯಕ್ತಿ ನೊವಿಲ್ಲದ ಕೀಲು, ಮತ್ತು ಚಲನಾ ಸಹಿತದ ಬದುಕು ಬಾಳುವಂತಾಗಿದೆ. ಚಪ್ಪೆ ಕೀಲಿನಲ್ಲಿ ಮತ್ತು ಮಂಡಿ ಕೀಲಿನಲ್ಲಿ ಪೂರ್ಣ ಕೃತಕ ಕೀಲು (ಟೋಟಲ್ ರಿಪ್ಲೇಸ್ ಮೆಂಟ್ ಆಫ್ ಜಾಯಿಂಟ್) ಜೋಡಿಸುವುದು ಸಾಮಾನ್ಯವಾಗಿ ಕಾಣುತ್ತಿದ್ದೇವೆ. ಆದರೆ ಉಳಿದ ಕೀಲುಗಳಲ್ಲಿ ಇದರ ಬಳಕೆಯ ಪ್ರಯೋಗ ನಡೆದಿದೆ. 

	ಸೋಂಕುರೋಗಗಳು ಕೀಲನ್ನಾವರಿಸಿದರೆ ಕೀಲು ಪೂರ್ಣ ಹಾಳಾಗುತಿತ್ತು ಆದರೆ ಹೊಸ ಹೊಸ ಬಲಶಾಲಿಗಳಾದ ಜೀವಿರೋಧಕ ಔಷಧಗಳ ಸಂಶೋಧನೆ ಮತ್ತು ಬಳಕೆಯಿಂದಾಗಿ ಕೀಲು ಕೀವಿನಿಂದ ಹಾಳಾಗುವದು ತಪ್ಪಿದೆ. ಹಾಗೆ ಒಂದು ಸಮಯ ಹಾಳಾದರೆ ನೋವು ಇಲ್ಲದಂತೆ ಮಾಡಲು ಕೀಲುಗಟ್ಟುವ ಶಸ್ತ್ರಕ್ರಿಯೆ ಕೈಕೊಳ್ಳಬಹುದು. ಇಲ್ಲವೆ ಪೂರ್ಣ ಕೃತಕ ಕೀಲು ಜೋಡಣೆ ಮಾಡಬಹುದು. 

ಕೀಲುದರ್ಶಕ : ಉದರದೊಳಗೆ ನಳಿಕೆತೂರಿ ಅದರ ಮೂಲಕ ಸಂತಾನ ಹರಣ ಶಸ್ತ್ರಕ್ರಿಯೆ, ಮಾಡುವುದರಿಂದ ಪ್ರಾರಂಭವಾದ ಉದರದರ್ಶಕ ಹೊಟ್ಟೆಯೊಳಡಗಿದ ಅನೇಕ ರೋಗಗಳನ್ನು ಪತ್ತೇ ಹಚ್ಚಿ ಶಸ್ತ್ರ ಕ್ರಿಯಾ ಚಿಕಿತ್ಸೆ ಮಾಡುವಲ್ಲಿ ಯಶಸ್ಸು ಪಡೆದಿದೆ. ಅಂತಹದೇ ಯಂತ್ರ ಸಹಾಯದಿಂದ ಕೀಲೊಳಗೆ ನಳಿಕೆತೂರಿ ಅದರ ಮೂಲಕ ಕೀಲೋಳಗಿನೆಲ್ಲ ಭಾಗ ವೀಕ್ಷಿಸಿ ದೋಷಕಂಡು ಅದನ್ನು ಸರಿಪಡಿಸಲು ಸಾಧ್ಯವಾಗಿದೆ. ಮುಖ್ಯವಾಗಿ ಮಂಡಿ ಕೀಲಿನಲ್ಲಿ ಆರ್ಧ ಚಂದ್ರಾಕಾರದ ಮೆಲ್ಲೆಲುವಿನ ತಟ್ಟೆಗಳ ಹರಿತ; ಹಿಂದು ಮುಂದಿನ ಅಡ್ಡಡ್ಡ ಹುರಿಗಳಗಾಯ; ಕೀಲೊಳುಪರೆಯ ರೋಗ; ಮೆಲ್ಲೆಲುವಿನ ನ್ಯೂನತೆ ಸರಿಪಡಿಸಲು ಕೀಲುದರ್ಶಕ ಶಸ್ತ್ರಕ್ರಿಯೆ ಅತ್ಯಂತ ಫಲಕಾರಿಯಾಗಿದೆ. ಸಾದಾ ಶಸ್ತ್ರಕ್ರಿಯೆಯಿಂದ ಹಲವಾರು ವಾರಗಳಷ್ಟು ವಿಶ್ರಾಂತಿ ಬೇಕಾಗುತಿತ್ತು. ಆದರೆ ಕೀಲುದರ್ಶಕದ ಮೂಲಕ ಶಸ್ತ್ರಕ್ರಿಯೆ ಮಾಡಿಸಿಕೊಂಡ ಮರುದಿವಸದಿಂದಲೇ ವ್ಯಕ್ತಿ ಒಡಾಡುತ್ತಿರಲು ಸಾಧ್ಯವಿದೆ. 

ಸಿತೋಳಿನ ವಿಶಾಲದರ್ಶಕ (ಚಿತ್ರ - 6) ಇಂಗ್ಲಿಷ ಅಕ್ಷರ ಸಿ ನಂತೆ ತೋಳು ಹೊಂದಿದ ಈ ವಿಶಿಷ್ಟ ಎಕ್ಸ್‍ಕಿರಣಗಳ ಯಂತ್ರದಿಂದ ತೆಗೆದ ಚಿತ್ರ ಮಗ್ಗುಲಿನಲ್ಲಿರುವ ದೂರದರ್ಶನದ ಪರದೆಯ ಮೇಲೆ ಕಾಣಬಹುದು. ಅಪ್ಪಿಕೊಳ್ಳುವಂತ ತೋಳಿರುವುದರಿಂದ ಯಾವುದೇ ಅಂಗ ಭಾಗವನ್ನು ಅಲುಗಾಡಿಸದೆ ಯಂತ್ರವನ್ನು ತಿರುಗಿಸುತ್ತ ನೇರ ಹಾಗೂ ಮಗ್ಗುಲ ಚಿತ್ರಗಳನ್ನು ಕಾಣಬಹುದು. ಇದರಿಂದಾಗಿ ಎಲುಬು ಮುರಿತಗಳ ಚಿಕಿತ್ಸೆ ಬಹಳ ಸರಳವಾಗಿದೆ. ಚರ್ಮ ಕೊಯ್ಯದೆ ಅತ್ಯಲ್ಪ ಚಿಕ್ಕಗಾಯದ ಮೂಲಕ ಮುರಿದೆಲುವನ್ನು ಸರಿಕೂಡಿಸಿ, ಕೂಡಿಸಿದ್ದನ್ನು ಖಚಿತ ಪಡಿಸಿಕೊಂಡು ಒಳಹಿಡಿತ ಸಾಧಿಸಲು ಸಾಧ್ಯವಾದುದರಿಂದ ಅತ್ಯಂತ ಭಯಾನಕವೆನಿಸುವ ತೊಡೆಲು ಮುರಿತದ ರೋಗಿ ಸಹ ಅಲ್ಪ ಸ್ವಲ್ಪ ಸಹಾಯದಿಂದ ಕೂಡಲೇ ನಡೆದಾಡಲು ಸಾಧ್ಯವಾಗಿದೆ. ಆಸ್ಪತ್ರೆಯಲ್ಲಿ ಕಳೆಯುವ ದಿನಗಳು; ನೋವಿನಿಂದ ಬಳಲುವ ಸಮಯ, ಮತ್ತು ಒಟ್ಟು ಹಣ ಕಡಿಮೆಯಾಗಿ; ದೈಹಿಕವಾಗಿ ಬೇಗನೇ ಚೇತರಿಸಿಕೊಂಡು ಮಾನಸಿಕ ಉಲ್ಲಾಸದಿಂದಿರಲು ಇಂದಿನ ವ್ಯೆಜ್ಞಾನಿಕ ಬೆಳವಣಿಗೆಯು ಸಹಾಯಕಾರಿಯಾಗಿದೆ. ಬೆನ್ನೆಲುತಟ್ಟೆ ಸರಿತದಂತಹ ಸಮಸ್ಯೆಯನ್ನು ನಳಿಕೆಯ ಮುಖಾಂತರ ಶಸ್ತ್ರ ಕ್ರಿಯೆ ಕೈಕೊಂಡು ಅತ್ಯಂತ ಹರ್ಷದಾಯಕ ಫಲ ಪಡೆಯಲು ಸಾಧ್ಯವಾಗಿದೆ. 

	ಇವುಗಳಲ್ಲದೆ ಸಂಜಾತ ವಿಕಲತೆಗಳಾದ ಚಪ್ಪೆಕೀಲುತಪ್ಪಿಕೆ ; ಲಟ್ಟಪಾದಗಳನ್ನು ಅಸ್ಥಿಶಾಸ್ತ್ರದತಜ್ಞರು ಶಸ್ತ್ರಕ್ರಿಯೆ ಇಲ್ಲದೆಯೂ ಇಲ್ಲವೆ ಶಸ್ತ್ರಕ್ರಿಯೆ ಮಾಡಿ ಸರಿಪಡಿಸುವಲ್ಲಿ ಯಶಸ್ಸು ಸಾಧಿಸಿದ್ದಾರೆ.

ಎಲುಬಿನ ಕಸಿ ಅಥವಾ ನಾಟಿ : ಕೆಲವು ಸಂದರ್ಭಗಳಲ್ಲಿ ಎಲುಬು ಬೆಳೆಯಲು ಪ್ರೇರಣೆ ಬೇಕಾಗುತ್ತದೆ. ಅದು ಎಲುಬಿನಿಂದಲೇ ಸಿಗುತ್ತದೆ. ಅದನ್ನು ಎಲುಬುನಾಟಿ ಮೂಲಕ ಪಡೆಯಬಹುದು. ಎಲುಬಿನೊಳಗಿರುವ ಪೊಳ್ಳು ತುಂಬಲು, ಯಾವುದೋ ಕಾರಣಕ್ಕಾಗಿ ಕೊಯ್ತೆಗೆದ ಎಲುಬಿನ ಭಾಗದಲ್ಲಿ ಬದಲಿಡುವದಕ್ಕಾಗಿಯೋ ಎಲುಬಿನ ಕಸಿ ಮಾಡಬೇಕಾಗುತ್ತದೆ. ಅದೇ ವ್ಯಕ್ತಿಯ ಇನ್ನೊಂದು ಭಾಗದಿಂದ ಪಡೆದ ಎಲುಬಿನ ನಾಟಿ ಅತ್ಯಂತ ಶ್ರೇಷ್ಠ ಆದರೆ ಹೆಚ್ಚಿನ ಪ್ರಮಾಣದಲ್ಲಿ ನಾಟಿ ಎಲುಬು ಬೇಕಾದರೆ ಇನ್ನೊಬ್ಬರ ಎಲುಬನ್ನೇ ಪಡೆಯಬೇಕಾಗುತ್ತದೆ. ಹೀಗಾಗಿ ಎಲುಬಿನ ಬ್ಯಾಂಕ್ ಪ್ರಾರಂಭವಾಯಿತು. ಬೇರೆಯವರಿಂದ ಪಡೆದ ಎಲುಬುಗಳನ್ನು ವಿಕಿರಣತೆಗೊಳಪಡಿಸಿ, ಕೆಡದಂತೆ ಆಳಶೀತದಲ್ಲಿ ಸಂಸ್ಕರಿಸಿ, ಕೆಡದಂತೆ ಶೇಖರಿಸಿಡುತ್ತಾರೆ. ಇಂತಹುಗಳನ್ನು ಸಂದರ್ಭಾನುಸಾರ ಬಳಸುತ್ತಾರೆ ರಕ್ತದ ಬ್ಯಾಂಕ್, ವೀರ್ಯ ಬ್ಯಾಂಕ್, ಕಣ್ಣಿನ ಬ್ಯಾಂಕ್‍ಗಳಂತೆ ಎಲುಬಿನ ಬ್ಯಾಂಕ್ ಅಸ್ಥಿ ತಜ್ಞನಿಗೆ ಕಾರ್ಯ ನಿರ್ವಹಿಸುವಲ್ಲಿ ಬಹಳ ಸಹಾಯಕವಾಗಿದೆ. ರೋಗಿಗಳಿಗೆ ವರದಾನವಾಗಿದೆ. 	
(ಪರಿಷ್ಕರಣೆ: ಡಾ. ಎಸ್.ಎಸ್.ಪಾಟೀಲ್)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ